ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟಿನ ಶ್ರೀ ಶನೀಶ್ವರನ ಸನ್ನಿಧಾನದ ಕಿರುಪರಿಚಯ

ಕನ್ನಡನಾಡಿನ ಹಲವಾರು ಶಕ್ತಿ ದೇವಾನು-ದೇವತೆಯರ ಕ್ಷೇತ್ರಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕುಂದಗನ್ನಡದ ತವರೂರಾದ ಈ ನಮ್ಮ ಕುಂದಾಪುರವೂ ಸಹ ಸೇರಿರುತ್ತದೆ. ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆಗಳೆಂಬ ಮೂರು ಭೂಪ್ರದೇಶಗಳ ಸಂಗಮವಾಗಿದೆ. ಮೈಲುಗಟ್ಟಲೆ ಕಡಲ ಕಿನಾರೆ. ನಿಸ್ವಾರ್ಥ ಮನೋಭಾವದ ಜನಸಮೂಹ, ದೈವೀ-ದೇವಿಗಳ ಆಲಯಗಳು, ಎಲ್ಲವೂ ಸಹ ಈ ಕರುನಾಡ ವನದೇವಿಯ ಸಿರಿಮುಡಿಯಲ್ಲಿ ಹಚ್ಚಹಸುರಿನ ತಾಣಗಳ ನಡುವೆ ಭವ್ಯವಾಗಿ ಕಂಗೊಳಿಸುತ್ತವೆ. ಇಂತಹುದೇ ವನಸಿರಿಯ ಮಡಿಲಲ್ಲಿ, ಒಂದು ಪ್ರದೇಶದ ನೀರನ್ನೇ ಒಣಗಿಸಿ ನೆಲವನ್ನು ಬರಡು ಮಾಡಿ, ಬಿರುಕು ಮೂಡಿಸಿ, ಮಾನವನ ಗಂಟಲಿನ ನೀರಿನ ಪಸೆಯನ್ನ ಒಣಗಿಸಲೂ ಬಲ್ಲ ಭೂದೇವಿ ತನ್ನ ಆಕ್ರೋಶ, ಆವೇಶವನ್ನೆಲ್ಲಾ ಒಮ್ಮೆಲೇ ಪ್ರದರ್ಶಿಸಿದ್ದಾಳೆ ಬೇರಾವ ಸಂಶಯವೂ ಇಲ್ಲವೆನ್ನುವುದಕ್ಕೆ ಸಾಕ್ಷಿಯಾಗಿ, ಹಚ್ಚ-ಹಸಿರೆಲ್ಲಾ ಮುದುಡಿ ಬಾಡಿ ಹಾಗೆ ಸುಮ್ಮನೇ ಉದುರಿ ಹೋದಂತೆ ಕಂಡುಬಂದ ರುದ್ರ ರಮಣೀಯ ಸ್ಥಳವಾದ ಬರಡು-ಬಂಜರು ಭೂಮಿ; ಬಾಡಿಹೋದ ಬೆಟ್ಟು ಅದುವೇ, ಬಾಡಬೆಟ್ಟು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನಿಂದ ಮೂಡು ದಿಕ್ಕಿಗೆ ಸಾಗುವ ಒಂದು ಅಗಲ ಕಿರಿದಾದ ರಸ್ತೆಯಲ್ಲಿ 4-5 K.m. ಹಾಗೆ ಕಾಲ್ನಡಿಗೆಯಲ್ಲಿ ಅಥವಾ, ವಾಹನಗಳಲ್ಲಿ ನೇರ ಸಾಗುತ್ತಾ ಹೋದರೆ ಕಾಣ ಸಿಗುವ, ಈ ನಿಡಿದಾದ ಕಾಡು-ಮೇಡಿನಂತಿರುವ ಬಿಳಲುಗಳ ನಡುವೆ ಅಡಿಯನ್ನಿಟ್ಟ ಕೂಡಲೇ, ಕೂಗಳತೆಯ ದೂರದಲ್ಲಿ ಪುಟ್ಟದೊಂದು ಗುಡಿ ಚಿಗುರೊಡೆದು, ದಿವ್ಯ ಭವ್ಯವಾಗಿ ಸತ್ಯಧರ್ಮಗಳ ತವರೂರಾಗಿ ಕಣ್ಮನ ಸೆಳೆಯುವುದು ಆ ವಿಶಾಲವಾದ ಒಂದು ಆರಾಧನಾ ಸ್ಥಳವಿದುವೇ, ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಸ್ವಾಮಿಯ ಕ್ಷೇತ್ರ. ಇಲ್ಲಿ ಬರುವಾಗ, ಮೊದಲಾಗಿ ಕಾಣಸಿಗುವ ಸ್ಥಳವೇ ಸ್ವಾಮಿದೇವರ ಕೂಡ್ಲು .ಇಲ್ಲಿಯೇ, ಈ ಶನೀಶ್ವರ ಸ್ವಾಮಿ ದೇವರ ನೆಲೆ!

ಶ್ರೀ ಸ್ವಾಮಿ ಶನಿ ದೇವನ ಅಮೋಘ ದರ್ಶನ

ಶ್ರೀ ಕ್ಷೇತ್ರದ ಧರ್ಮಾಧಿಕಾರಿಯಾಗಿರುವ ಶ್ರೀ ಜಯರಾಮರವರಲ್ಲಿ, ಶನಿಮಹಾರಾಜನು ಅದೆಷ್ಟೊಂದು ಶಕ್ತಿಶಾಲಿಯಾಗಿ ಏರಿ ಬರುವನೆಂದರೆ, ಬೇಡಿ ಬಂದ ಜನರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ ಎಂಬುದು ಪರಂಪರಾಗತವಾಗಿ ನಂಬಿಕೊಂಡು ಬಂದ ಸತ್ಯಸಂಗತಿ. ಇಂತಹ ಹಿನ್ನಲೆಯನ್ನೊಳಗೊಂಡ ಶ್ರೀ ಕ್ಷೇತ್ರದಲ್ಲಿನ ಶನಿಮಹಾದೇವನಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಪೂಜಾರಿಯು ಆರತಿ ಎತ್ತುತ್ತಿದ್ದ ಹಾಗೆಯೇ, ತಾಯಿಯ ತೆಕ್ಕೆಯಲ್ಲಿರುವಂತೆ ಕಂಡುಬರುವ ಗುಡಿಯಲ್ಲಿರುವ ಶ್ರೀ ಸ್ವಾಮಿಯು ಆ ಕೂಡಲೇ, ಇವರ ಶರೀರವನ್ನು ಕ್ಷಣ ಆವರಿಸಿ ಐಕ್ಯಗೊಂಡವನಂತೆ ತತ್‍ಕ್ಷಣ ಅಬ್ಬರಿಸುತ್ತ ಏರಿ ಬರುತ್ತಾನೆ. ಆಗಲ್ಲಿ ಇಡೀ ದೇವಾಲಯದ ಆವರಣವೇ ಕ್ಷಣಕಾಲ ಬದಲಾಗಿ ಹೋದಂತೆ ಭಾಸವಾಗುವುದು. ಯಾರೇ ಆಗಲಿ ಈ ಬದಲಾವಣೆಯನ್ನ ಅಲ್ಲಿ ಈಗಲೂ ಸಹ ನಾನು ಕಣ್ತುಂಬಿಸಿಕೊಂಡಂತೆ ನೋಡಿ ಮನವರಿಕೆ ಮಾಡಿಕೊಳ್ಳಬಹುದು.

ಏರಿ ಬಂದ ಸ್ವಾಮಿಯು ಬೇಡಿ ಬಂದ ಭಕ್ತರ ಕೇಳಿಕೆಯನ್ನು ಸಮಸ್ಯೆಯನ್ನು ತೊಂದರೆಗಳನ್ನು ಅಥವಾ ದುಃಖಗಳನ್ನ ಏನೇನು ಹೇಳುತ್ತಾರೋ ಅದನ್ನೆಲ್ಲಾ ಕೇಳಿಸಿಕೊಂಡು ನಂತರ ಅವರ ಆಯಾಯ ಸಮಸ್ಯೆಗಳಿಗೆ, ಒತ್ತಡಗಳಿಗೆ, ಕಾರಣ/ಘಟನೆಗಳನ್ನೂ ತಿಳಿಸಿ ಪರಿಹಾರ ಮಾರ್ಗವನ್ನು ಸೂಚಿಸುತ್ತಾರೆ. ಬೇಡಿ ಬಂದ ಭಕ್ತರ ಕಷ್ಟವನ್ನು ನೀಗುತ್ತಿದ್ದ ಶ್ರೀ ಶನಿದೇವರಿರುವ ದಿವ್ಯಸನ್ನಿಧಿಯು ಕಾಲಸರಿದಂತೆ, ಇದೀಗ ನವೀನಶೈಲಿಯಲ್ಲಿ ಕಟ್ಟಿದ ಆಧುನಿಕ ಆಕರ್ಷಕ ಗುಡಿ ಮೈತಳೆದು ನಿಂತಾಗ ಎಲ್ಲರೂ ನಿರಾಯಾಸವಾಗಿ ಉಸಿರು ಬಿಡುವಂತಿದೆ. ಶ್ರೀ ದೇವರ ಪಾದವನ್ನು ಮುಟ್ಟಿ ಏನನ್ನೇ ತಮ್ಮ ಯಥಾನುಶಕ್ತಿ ರೂಪದಲ್ಲಿ ಹರಕೆ ಹೊತ್ತು ಪ್ರಾರ್ಥನೆಯನ್ನಿರಿಸಿದರೆ, ಮದುವೆ, ಸಂತಾನದ ಬಗ್ಗೆ, ವ್ಯಾಪಾರ-ವ್ಯವಹಾರ, ಎಲ್ಲಾ ವಹಿವಾಟಿನ ಬಗ್ಗೆ, ಭೂಮಿ ಬಗ್ಗೆ, ಇನ್ನು ಅನೇಕ ವೈಯ್ಯಕ್ತಿಕ ಹಾಗೂ ವೃತ್ತಿಪರ ಜೀವನದ ಕುರಿತು ಸಮಸ್ಯೆಗಳಿದ್ದು ಅದರ ಪರಿಹಾರಕ್ಕೆ ಬೇಡಿಕೆಯನ್ನಿಟ್ಟು ಇಲ್ಲಿಗೆ ಬಂದವರ ಆ ಸರ್ವ ಬೇಡಿಕೆಗಳೆಲ್ಲವೂ ಸಹ ಯಥೇಚ್ಛವಾಗಿ ನೆರವೇರುತ್ತದೆ ಎಂಬ ಪ್ರತೀತಿಯಲ್ಲಿ ಇದೀಗ ಶ್ರೀ ಕ್ಷೇತ್ರಕ್ಕೆ ಹಿಂದೆಗಿಂತಲೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧೆಡೆಯಿಂದ ಸದ್ಭಕ್ತರು ಆಗಮಿಸುತ್ತಿದ್ದು, ತಮ್ಮ ಸಕಲ ಸಂಕಷ್ಟ-ಸಮಸ್ಯೆಗಳ ವಿಚಾರದಲ್ಲಿ ದೇವರ ಮುಂದಿಟ್ಟು, ತಂತಮ್ಮ ಇಷ್ಟಾರ್ಥಗಳನ್ನೆಲ್ಲಾ ಸಿದ್ಧಿ ಮಾಡಿಕೊಂಡವರು ಅನೇಕರಿದ್ದಾರೆ.

ಶ್ರೀಕ್ಷೇತ್ರದಲ್ಲಿರುವ ಸಪರಿವಾರ ದೈವಗಳ ಕುರಿತು

ಕೂಡ್ಲು ಶ್ರೀ ಸ್ವಾಮಿ ದೇವರ ತಾಣದಲ್ಲಿ ಶನಿದೇವನ ಜೊತೆಗೆ, ದೇವಿಯ ಭಯಾನಕ ರೂಪ ಹಾಗೂ ಸಪ್ತಮಾತೃಕೆಯರ ಪೈಕಿಯಲ್ಲಿ ಒಬ್ಬಳಾದ ಯೋಧೆ ದುರ್ಗಾದೇವಿಯ ಪರಿಚಾರಕಿಯರಾದ 64 ಅಥವಾ, 81 ತಾಂತ್ರಿಕ ದೇವತೆಗಳಾದ ಮುಖ್ಯ ಯೋಗಿನಿ ಪ್ರಬಲವಾದ ದೇವತೆ, ಶ್ರೀ ಚೌಡೇಶ್ವರಿ ದೇವರು, ಶ್ರೀ ಶನಿದೇವನ ತಾಯಿ ಶ್ರೀ ಛಾಯಾದೇವಿ, ಶ್ರೀ ನಾಗದೇವರು, ಶ್ರೀ ನಾಗಯಕ್ಷೀ, ಶ್ರೀ ಸ್ವರ್ಣಯಕ್ಷೀ, ಶ್ರೀ ರಕ್ತೇಶ್ವರಿ, ಶ್ರೀ ಆಂಜನೇಯ ಸ್ವಾಮಿ, ಮಲೆಯಾಳಿ ಬೊಬ್ಬರ್ಯ, ವೀರಭದ್ರ, ಅಣ್ಣಪ್ಪ, ಪಂಜುರ್ಲಿ, ಮಂತ್ರದೇವತೆ, ಕಲ್ಲುಕುಟಿಗ, ಖಾಡೀಯಮ್ಮ, ಯಕ್ಷೀ, ನೇತ್ರ ಹೈಗುಳಿ, ರಾಹು, ನೀಚ, ಭೂತರಾಯ ಹಾಗೂ ಕ್ಷೇತ್ರಪಾಲಕ ದೇವರು ಹಾಗೂ ಸಪರಿವಾರ ದೈವಗಳು ಮತ್ತು ಶ್ರೀ ಸನ್ನಿಧೀ ಬಸವ ಶ್ರೀಗಣೇಶ, ಅಶ್ವತ್ಥಮರ, ಶಮೀವೃಕ್ಷ, ಶ್ರೀ ತುಳಸಿ ಸಹಿತ ಈ ತಾಣವು ಸುಂದರವಾಗಿ ನೆಲೆಗೊಂಡು ಕಾರಣೀಕ ಕ್ಷೇತ್ರವಾಗಿ ಪ್ರಸಿದ್ಧಿಗೊಂಡಿದೆ. ಅಲ್ಲದೇ, ವಿಕ್ರಮಾದಿತ್ಯ ಸಮೇತ ಬೇತಾಳ ಅಲ್ಲಿಯೇ ಪಕ್ಕದಲ್ಲಿರುವ ಕೊಳವೆಯ ಹತ್ತಿರವಿರುವ ಮದಗದ ಸಮೀಪ ಇರುವ ಬಹುಗಾತ್ರದ ಹುತ್ತದೊಂದಿಗೆ ಬೆಳೆದು ನಿಂತು ಕಂಗೊಳಿಸುವ ಚಿಂಗೊಳಿ ಮರದಲ್ಲಿ ಇರುವುದಾಗಿ ಆರೂಢಪ್ರಶ್ನೆಯಲ್ಲಿ ಅರಿವಿಗೆ ಬರುತ್ತಿದ್ದ ಹಾಗೆಯೇ, ಸಮಸ್ತ ಊರ ಹಾಗೂ ಪರಊರ ಭಕ್ತಾದಿಗಳಿತ್ತ ತನು-ಮನ-ಧನ ಸಹಕಾರದಿಂದ ಇದೀಗ ಸುಂದರ ದೇಗುಲ ನಿರ್ಮಾಣಗೊಂಡಿದ್ದು, ಮೇಲ್ಭಾಗದ ಛಾವಣಿಯಲ್ಲಿ ಕಲಾತ್ಮಕ ಕುಸುರಿ ಕೆಲಸ ಮಾಡಲಾಗಿದ್ದು, ಗೋಪುರದ ಶಿಖರದಲ್ಲಿ ಕಲಶವನ್ನು ಪ್ರತಿಷ್ಠಾಪಿಸಲಾಗಿದೆ. ಅಂತಹ ಈ ಪುಣ್ಯ ಸ್ಥಳದಲ್ಲಿ ಪ್ರಧಾನ ದೇವರು ಶ್ರೀ ಶನಿದೇವನೇ ಆಗಿರುತ್ತಾನೆ.

Board of Trustees

Sl no Name and Address Post Held - Occupation
1. JAYARAMA BADABETTU
S/O Marla Badabettu,Kanyana Post
& Village Kundapura Tq, Udupi Dist.
President
Temple Priest
2. ANANDA
S/O Subha Badabettu,Kanyana Post
& Village Kundapura Tq, Udupi Dist.
Secretary
Businessman
3. RAJU
S/O Babu Guddeyangadi,Kanyana Post
& Village Kundapura Tq, Udupi Dist.
Treasurer
Businessman
4. RAJU
S/O D.Babu Udayanagara,Gulvadi
Kundapura tq Udupi Dist
Vice President
Businessman
5. HARISH
S/O Narasimha Badabettu,Kanyana Post
& Village Kundapura Tq, Udupi Dist.
Joint Secretary
Businessman
6. ASHWATH
S/O Shankara Badabettu,KanyanaPost
& Village Kundapura Tq, Udupi Dist.
Member
Businessman

ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪವು ಎಲ್ಲಿಯೂ ಸಹ ಕಿಂಚಿತ್ತೂ ನಾಶವಾಗಲಾರದಂತೆ! ಆದರೇ ಅದೇ, ಪುಣ್ಯ-ಕ್ಷೇತ್ರಗಳಿಗೆ ಹೋಗುವುದರಿಂದ ಇತರ ಕ್ಷೇತ್ರಗಳಲ್ಲಿ ನಾವು ಅರಿತೋ ಅರಿಯದೆಲೇ ಮಾಡಿದ ಜನ್ಮ-ಜನ್ಮಾರ್ಜಿತವಾದ ಸರ್ವಪಾಪವೂ ನಾಶವಾಗುವುದಂತೆ! ಹಾಗಾದರೆ, ಮತ್ತೇಕೇ ತಡ......??!!!

ಬನ್ನಿ ಒಮ್ಮೆ ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟಿಗೆ... ಶ್ರೀ ಸ್ವಾಮಿ ಶನೀಶ್ವರನಾ ಸನ್ನಿಧಾನಕ್ಕೆ...!!!