ಶ್ರೀ ಕ್ಷೇತ್ರದ ಹಿನ್ನಲೆ ಪುರಾಣ:
43 ವರ್ಷಗಳ ಇತಿಹಾಸವಿರುವ ಈ ಹಿನ್ನಲೆಯಲ್ಲಿ, ಗುಲ್ವಾಡಿಯಲ್ಲಿ ವಾಸವಾಗಿದ್ದ ಮರ್ಲಣ್ಣ ಹಾಗೂ
ಅವರ ಸಂಸಾರ ಕೂಡ್ಲು ಬಾಡಬೆಟ್ಟಿನ ಸ್ವಾಮಿ ದೇವರ ಕೂಡ್ಲು ಹತ್ತಿರದ ಕಾಡು ಪ್ರದೇಶದಲ್ಲಿ
ನೆಲೆನಿಂತ ಮದಗದ ಬಳಿ ಇರುವ ಕಿರಿದಾದ ಕೊಳವೆಯ ನೀರನ್ನು ಕುಡಿಯಲು ಹಾಗೂ ದಿನನಿತ್ಯದ
ಬಳಕೆಗೆ ಉಪಯೋಗಿಸುತ್ತಿದ್ದರೆನ್ನಲಾದ ಆ ಜಾಗದಲ್ಲಿ ದಿನನಿತ್ಯವೂ ಬಲವಾದ ಸರ್ಪವೊಂದರ
ಸಂಚಾರವಾಗುತ್ತಿತ್ತು. ತನ್ನಡೀ; ಸಂಚಾರದಡೀ ಎಲ್ಲಿಯಾದರೂ ಅಶುಚಿ-ಮಲಿನತೆ ಕಂಡುಬಂದಾಗಲೆಲ್ಲಾ
ಯಾರಿಗೂ ಆ ನೀರನ್ನು ಕೊಂಚ ಸ್ಪರ್ಶಿಸಲು ಕೂಡ ಬಿಡುತ್ತಿರಲಿಲ್ಲವಾಗಿತ್ತು. ಹಾಗಾಗಿ, ನಾಗದೋಷಕ್ಕೆ
ಗುರಿಯಾಗಬಾರದೆನ್ನುವ ಕಾರಣಕ್ಕೇ ಜನ ತಗ್ಗಿ-ಬಗ್ಗಿ ನಡೆದು ಆದಷ್ಟು ಆ ಜಾಗವನ್ನು
ಶುಚಿಯಾಗಿರಿಸುತ್ತಿದ್ದರು.ಇಷ್ಟರಲ್ಲಿಯೇ, ಇಲ್ಲಿಯೇ ಸಮೀಪ ವಾಸ್ತವ್ಯ ಹೂಡಿದ್ದ ಮರ್ಲಣ್ಣ ಎನ್ನುವವರು ತೆಂಗು ಬಾಳೆ-ಅಡಿಕೆ
ಇತ್ಯಾದಿಗಳನ್ನು ಬೆಳೆಸಿ ತಮ್ಮ ಕೃಷಿಯೇತರ ಉದ್ಯೋಗವನ್ನಾಗಲೇ ಶುರುಮಾಡಿದ್ದ ಕೆಲವೇ
ವರ್ಷಗಳಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾದರು. ಧೈರ್ಯಗುಂದದೇ, ಸಕಲ ದೇವಾನು-ದೇವತೆಯರಿಗೆ
ಹರಕೆಯನ್ನಿರಿಸಿಕೊಂಡು ವೈದ್ಯರ ಮೊರೆ ಹೋಗಿ ಸೂಕ್ತ ಚಿಕಿತ್ಸೆ ಪಡೆದು, ಸಂಪೂರ್ಣವಾಗಿ
ಗುಣಮುಖರಾದರು ಕೂಡ. ಆದರೆ ಅದೇಕೋ..ಏನೋ! ಅತ್ತಿತ್ತ ಅಲೆದಾಡಿ ಸುತ್ತಾಡುತ್ತಿದ್ದ ಸರ್ಪಕ್ಕೆ
ಒಂದು ನೆಲೆಯಾಗಬೇಕೆಂದುಕೊಂಡ ಕುಟುಂಬ, ಸ್ವಾಮಿ ದೇವರ ಕೂಡ್ಲುವಿನ ಸ್ವಾಮಿ ದೇವರ
ಸನ್ನಿಧಿಯಲ್ಲಿ ನಾಗಪ್ರತಿಷ್ಟೆಯೂ ಕೂಡ ಮಾಡಿದರು. ಆಪತ್ಕಾಲದಲ್ಲಿ ಹೇಳಿಕೊಂಡ ಸಕಲ ಹರಕೆ
ಸೇವೆಗಳನ್ನು ಕಾಲಕ್ರಮೇಣ, ಒಂದೊಂದಾಗಿ ನೆರವೇರಿಸುತ್ತಾ ಬಂದ ಹಾಗೆ, ಅಲ್ಲಿಂದ ಇವರ
ಕುಟುಂಬಕ್ಕೆ ಹೊಸದೊಂದು ಚೈತನ್ಯದ ಚಿಲುಮೆ ಮೂಡತೊಡಗಿದರೂ ಸಹ, ಮಾರಣಕಟ್ಟೆ ಕ್ಷೇತ್ರಕ್ಕೆ
ಬೆಳಕಿನ ಸೇವೆಯಿನ್ನೂ ನೆರವೇರಿಸಬೇಕೆನ್ನುವ ಅಂಶವೊಂದು ಕನಸಿನ ರೂಪದಲ್ಲಿ ಬಂದು ಕುಟುಂಬದ
ಗಮನಕ್ಕೆ ಆಗಾಗ್ಗೆ ಗೋಚರಿಸುವಂತೆ ಬರುತ್ತಿತ್ತು.
ಅದೇ ಸಮಯಕ್ಕೆ ಸರಿಯಾಗಿ, ತಮ್ಮ ವಿದ್ಯಾಭ್ಯಾಸವನ್ನು ಒಂದು ಹಂತದವರೆಗೆ ಮುಗಿಸಿ, ಕೂಲಿ
ಕಾರ್ಮಿಕರಾಗಿ ದುಡಿಯುತ್ತಿದ್ದ ಮರ್ಲಣ್ಣನವರ ಚತುರ್ಥ ಪುತ್ರ ಶ್ರೀ ಜಯರಾಮ (ಪ್ರಸ್ತುತ, ಶ್ರೀ ಕ್ಷೇತ್ರದ
ಧರ್ಮದರ್ಶಿಗಳು) ಇವರಿಗೆ, ನಿದ್ದೆಯಲ್ಲಿ ಉಸಿರುಗಟ್ಟಿಸಿದಂತಾಗುವುದು, ಭಯ-ಆತಂಕವೆಲ್ಲಾ ಮನದಿ
ಒಮ್ಮೆಲೇ ಆವರಿಸಿದಂತಾಗುವುದು, ಅಗೋಚರ ಶಬ್ಧಗಳ ಆಲಾಪ -ಹೀಗೆ, ಒಂದರ ಮೇಲೊಂದು
ಚಿತ್ರ-ವಿಚಿತ್ರ ತಾಪತ್ರಯಗಳು ಗೋಚರಕ್ಕೆ ಬರತೊಡಗಿದವು. ಜನಸಾಮಾನ್ಯರಂತೆ ಕಾರಣ ತಿಳಿಯಲು
ಸಹಜವಾಗಿಯೇ ಜ್ಯೋತಿಷಿಯ ಬಳಿ ಅವರು ಸಾಗಿದಾಗ, ನಾನಾ ರೀತಿಯ ವಾಮಾಚಾರ, ಕೃತ್ರಿಮ
ದೋಷದ ಪರಿಣಾಮವೇ ಇದೆಲ್ಲಾ ಎಂಬ ಮಾಹಿತಿಯನ್ನರಿತು, ಪರಿಹಾರಕ್ಕೆಂದು ಸಂಬಂಧಪಟ್ಟ ಸಕಲ
ಉಚ್ಛಾಟನಾ ಹೋಮವನ್ನು ಕೂಡ ಮೇಲಿಂದ-ಮೇಲೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ
ಇವರಿಗೆದುರಾಗಿ ಬಂತು, ಆದರೂ ಕೂಡ, ಅದು ಫಲಕಾರಿಯಾಗಲಿಲ್ಲವೆನ್ನುವಂತೆ ಸಮಸ್ಯೆಗಳು
ಮತ್ತಷ್ಟು ಉಲ್ಬಣಗೊಂಡು ಇಡೀ ಮರ್ಲಣ್ಣನವರ ಸಂಸಾರವನ್ನೇ ಅತೀವವಾಗಿ ಕಾಡಿ, ಸಮಸ್ಯೆಗಳ
ಸುಳಿಯಲ್ಲಿ ಒಬ್ಬೊಬ್ಬರನ್ನೇ ಸಿಲುಕಿಸಿತು.




ಮೊದ-ಮೊದಲು ಇದನ್ನೆಲ್ಲಾ ಒಂದು ಮಟ್ಟಕ್ಕೆ ನಂಬಿಯೂ ನಂಬಲಾಗದ ಸ್ಥಿತಿಯನ್ನು ತಲುಪಿದ ಕುಟುಂಬಕ್ಕೆ, ದಿನ ನುಂಗುವ ಕ್ಷಣಗಳ ಮುಂದೆ, ತಮ್ಮ ಇಡೀ ಸಂಸಾರದ ಬದುಕೇ ಬಲಿಯಾಗುತಿವೇಯೋ ಏನೋ ಎನ್ನುವ ಕಳವಳ ಅತೀವವಾಗತೊಡಗಿತು. ಸಾಕಷ್ಟು ನೊಂದ ಬೆಂದು ಹೋದ ಕುಟುಂಬ ಕಟ್ಟಕಡೆಯಲ್ಲಿ, ಸ್ವಾಮಿ ದೇವರ ಕೂಡ್ಲುವಿನಲ್ಲಿ ಆದ ಶ್ರೀ ನಾಗದೇವರ ದರ್ಶನಭಾಗ್ಯದಿಂದ ಹಾಗೂ ಆರೂಢ ಪ್ರಶ್ನೆಯಿಂದ ಅಲ್ಲಿನ ಸರ್ವ ಗ್ರಾಮಸ್ಥರ ಸಮಕ್ಷಮದಲ್ಲಿಯೇ ತಮ್ಮ ಈ ಬದುಕಿನ ಅಡಚಣೆಗಿರುವ ಸತ್ಯ ಸಂಗತಿಯಾದರೂ ಏನು?, ಏತ್ತ?! - ಎನ್ನುವ ವಿಚಾರಗಳೆಲ್ಲಾ ಸಂಪೂರ್ಣ ಗೋಚರಕ್ಕೆ ಬಂದುಬಿಟ್ಟವು. ಅಲ್ಲದೇ, ತಾವು ನೆಲೆಸಿರುವಂತಹ ಸಂಬಂಧಪಟ್ಟಂತಹ ಭೂಮಿ ಮೂಲತಃ, ಜೈನಭೂಮಿಯಾಗಿದ್ದು ಇಲ್ಲಿ ಹಲವು ರೀತಿಯ ದೈವಗಳು ತಮಗೆ ನೆಲೆ ಸಿಗುವವರೆಗೂ ಅತ್ತಿತ್ತ ಅಲೆಮಾರಿಯಂತೆ ಅಲೆದಾಡಿ, ದೃಷ್ಟಿ ಬೀರುತ್ತಿವೆ ಎಂದೆಲ್ಲಾ ಸಂಪೂರ್ಣವಾಗಿ ಅರಿತ ಮೇಲೆಯೇ ಬಲ್ಲವರಲ್ಲಿ ಅನೇಕ ಬಾರಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು, ಮರ್ಲಣ್ಣನ ಕುಟುಂಬದವರು. ಶ್ರೀ ದೇವಿಯ ಅಣತಿಯ ನುಡಿಯಂತೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಜಯರಾಮರವರಿಗೆ ವಿವಾಹ ಕಾರ್ಯ ನೆರವೇರಿ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳ ಹಿತನುಡಿಯ ಶುಭಾರ್ಶೀವಾದದೊಂದಿಗೆ, ಸಾಕಷ್ಟು ಕಟ್ಟುಪಾಡು, ನುಡಿ ಅಡಚಣೆಗಳ ನಡುವೆಯೂ ಸಹ, ಶ್ರೀ ಜಯರಾಮರವರ ಮೇಲೆ "ಆದಿಶಕ್ತಿಯಾದ ಶ್ರೀ ಚೌಡೇಶ್ವರಿ ದೇವಿ"ಯು ಸಂಪೂರ್ಣ ಏರಿ ಬಂದು ನುಡಿಯಾನ್ನಡಲು ಮೊದಲು ಅನುವಾಯಿತು. ಮೊದ-ಮೊದಲು ಮನೆಯ ತುಳಸಿ ಕಟ್ಟೆಯ ಭಾಗದಲ್ಲಿ ದೇವಿಯ ದರ್ಶನ ಮಾಡಿ ಕಷ್ಟಗಳನ್ನು ದೂರ ಮಾಡಿ ನೆಮ್ಮದಿಯ ಜೀವನಕ್ಕೆ ಕಾಲಿಡುತ್ತಿದ್ದ ಹಾಗೆಯೇ, ಮತ್ತೆ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿಕೊಂಡ ಪರಿ. ದಿಕ್ಕೇ ತೋಚದ ಕುಟುಂಬ, ಮತ್ತೇ ನಂಬಿದ ಚೌಡೇಶ್ವರಿಯನ್ನೇ ಪ್ರಶ್ನಿಸಲು ಮುಂದಾದ ರೀತಿ. ಇದ್ದಕ್ಕಿದ್ದ ಹಾಗೆ ಶ್ರೀ ಶನಿದೇವರ ಕಥಾಪ್ರವಚನವನ್ನು ಮಾಡು, ಆಗ ಎಲ್ಲವೂ ಮತ್ತಷ್ಟು ಸರಿಯಾಗಿ ಗೋಚರಕ್ಕೆ ಬರುವಂತೆ ಅನುಗ್ರಹಿಸುವೆನು ಎನ್ನುವ ನುಡಿ ಆ ಶ್ರೀ ಚೌಡೇಶ್ವರೀ ದೇವಿಯದಾಗಿತ್ತು.
ನಿಜಕ್ಕೂ, ಅವರ ಪಿಸುಮಾತು ಸತ್ಯವಾಗುವುದೇ ಎನ್ನುವ ಶೋಧನೆಯಲ್ಲಿ ಮುಂದಕ್ಕೆ ಸಾಗಿದ ಇವರ
ಕುಟುಂಬಕ್ಕೆ, ನಿಜಸಂಗತಿ ಹೌದೆಂದು ತಿಳಿದ ಆ ಪರಿ. ನಿಜವಾಗಿಯೂ ತಮಗೆ ಇದನ್ನೆಲ್ಲಾ ನಿಭಾಯಿಸಿಕೊಂಡು ಹೋಗುವ ಶಕ್ತಿ, ಸಾಮಥ್ರ್ಯವಿದೆಯೇ ಎನ್ನುವ ಗೊಂದಲದಲ್ಲಿಯೇ ಕೈಯನ್ನು
ಸಡಿಲ ಬಿಡುತ್ತ ಬಂದಂತಹ ಕುಟುಂಬ ಮತ್ತೇ ಆ ನಂಬಿಕೆಯನ್ನು ದೂರ ಸರಿಸುತ್ತಾ ಹೋದ ಆ ಕ್ಷಣ,
ಇವರ ಕೈಹಿಡಿಯುವುದನ್ನು ಸಹ ಆ ಶನಿದೇವ ಬಿಟ್ಟು ಬಿಟ್ಟಂತೆ; ಬೆಂಬಿಡದೇ ಕೆಲಕಾಲ
ಕಾಡತೊಡಗಿದಂತೆ ಕಂಡುಬಂದ ಬಗೆ ಅದಾಗಿತ್ತು. ಆ ದೇವರು ಆಯುಷ್ಯದ ಜೊತೆಗೆ, ಆರೋಗ್ಯವನ್ನೂ
ಸಹ ಸರಿಸಮನಾಗಿ ನೀಡಿದ್ದರೇ, ಈ ಬದುಕು ನಿಜಕ್ಕೂ ತಮಗೆ ಭಾರವೆನಿಸುವುದಿಲ್ಲವಾಗಿತ್ತು ಎಂಬ
ಬೇಸರದಲ್ಲಿಯೇ ಇದ್ದ ಕುಟುಂಬ ಕೊನೆಗೆ, ಜೋಯಿಸರ ಉಪದೇಶದಂತೆ, ಸಂಕಷ್ಟಗಳ ನಡುವೆಯೂ
ಸಹ ಸೋತು ಸುಣ್ಣವಾಗಿ, ಎಲ್ಲವನ್ನೂ ಆ ಭಗವಂತನ ಇಚ್ಛೆಯೆಂಬಂತೆ ತಿಳಿದು, ಅವನ ಕರುಣೆಗಾಗಿ
ಕಾದು-ಕಾದು ಕುಳಿತಲ್ಲಿಯೇ, 48 ದಿನಗಳ ಕಾಲ ಚೌಡೇಶ್ವರೀ ಹಾಗೂ ಶನಿದೇವರ ಜಪವನ್ನು ಶ್ರೀ
ಜಯರಾಮರು ಸಾಂಗವಾಗಿ ಎಡೆಬಿಡದೇ ಜಪಿಸಿದರು.